52
ಸುಳ್ಯ: ಸುಳ್ಯ ಕಡಬ ತಾಲೂಕಿನ ಹಲವು ಭಾಗಗಳಲ್ಲಿ ಮಾರ್ಚ್ 15ರಂದು ಸಂಜೆ ವೇಳೆಗೆ ಮಳೆಯೊಂದಿಗೆ ಭಾರೀ ಗಾಳಿ ಬೀಸಿದ ಪರಿಣಾಮ ಕೆಲವು ಕಡೆ ಹಾನಿ ಸಂಭವಿಸಿದೆ.
ಗುತ್ತಿಗಾರು, ನಡುಗಲ್ಲು, ಹರಿಹರ ಪಳ್ಳತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ಸುಬ್ರಹ್ಮಣ್ಯ ಹಾಗೂ ಐನೆಕಿದು ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬಾಳುಗೋಡು ಮತ್ತು ಐನೆಕಿದು ಪರಿಸರದಲ್ಲಿ ಮಳೆಯ ಜೊತೆ ಭಾರೀ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿರುವುದು ತಿಳಿದುಬಂದಿದೆ. ಕೆಲವೆಡೆ ಮರಗಳು ರಸ್ತೆಗಳಿಗೆ ಅಡ್ಡವಾಗಿ ಉರುಳಿ ಬಿದ್ದ ಪರಿಣಾಮ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ಇದೇ ವೇಳೆ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲೂ ಗಾಳಿಯ ಅಬ್ಬರ ಹೆಚ್ಚಿದ್ದು, ಸವಾರಿ ಮಂಟಪದಿಂದ ದೇವರಗದ್ದೆ ಕಡೆಗೆ ತೆರಳುವ ರಸ್ತೆಯ ಬದಿಯಲ್ಲಿದ್ದ ಬೃಹತ್ ಮರವೊಂದು ರಸ್ತೆ ಮೇಲೆ ಉರುಳಿ ಬಿದ್ದಿರುವುದಾಗಿ ತಿಳಿದುಬಂದಿದೆ.
ಗಾಳಿಯ ಪರಿಣಾಮ ಇನ್ನೂ ಕೆಲವೆಡೆ ಹಾನಿ ಸಂಭವಿಸಿರುವ ಸಾಧ್ಯತೆ ಇದ್ದು, ಅದರ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. 🌧️🌬️