ಏಳು ವರ್ಷಗಳ ಬಳಿಕ ಇರಾನ್‌ನಿಂದ ಭಾರತಕ್ಕೆ ಕಚ್ಚಾತೈಲ ಆಮದು ಪುನರಾರಂಭ
ನವದೆಹಲಿ: ಸುಮಾರು ಏಳು ವರ್ಷಗಳ ಸುದೀರ್ಘ ವಿರಾಮದ ಬಳಿಕ ಭಾರತವು ಇರಾನ್‌ನಿಂದ ಮತ್ತೆ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿ ಮೂಲಕ ಸಾಗಣೆ ವ್ಯತ್ಯಯ ಉಂಟಾದ ಹಿನ್ನೆಲೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
2019ರ ಮೇ ತಿಂಗಳ ನಂತರ ಇರಾನ್ (ಟೆಹರಾನ್) ನಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಗೆ ಎಂದು ಕೇಂದ್ರ ತೈಲ ಸಚಿವಾಲಯ ತಿಳಿಸಿದೆ.
ವಿಶ್ವದ ಮೂರನೇ ಅತಿದೊಡ್ಡ ತೈಲ ಬಳಕೆದಾರ ರಾಷ್ಟ್ರವಾಗಿರುವ ಭಾರತ ಪ್ರಸ್ತುತ 40ಕ್ಕೂ ಹೆಚ್ಚು ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಇತ್ತೀಚಿನ ಜಾಗತಿಕ ಸಂಘರ್ಷದ ಹಿನ್ನೆಲೆ, ಪೂರೈಕೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಹಾಗೂ ಇಂಧನ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ತೈಲ ಶುದ್ಧೀಕರಣ ಘಟಕಗಳು ಮತ್ತೆ ಇರಾನ್ ಕಡೆ ಮುಖ ಮಾಡಿವೆ.
ತಜ್ಞರ ಪ್ರಕಾರ, ಈ ನಿರ್ಧಾರವು ದೇಶದ ಇಂಧನ ನೀತಿಯಲ್ಲಿ ಪ್ರಮುಖ ಬದಲಾವಣೆಗೆ ದಾರಿ ಮಾಡಿಕೊಡಬಹುದಾಗಿದ್ದು, ಭವಿಷ್ಯದಲ್ಲಿ ಆಮದು ಮೂಲಗಳ ವೈವಿಧ್ಯತೆ ಹೆಚ್ಚಿಸುವಲ್ಲಿ ಸಹಾಯಕವಾಗಲಿದೆ. ಮಧ್ಯಪ್ರಾಚ್ಯದ ಅಸ್ಥಿರ ಪರಿಸ್ಥಿತಿಯ ನಡುವೆಯೂ, ಭಾರತವು ತನ್ನ ಇಂಧನ ಅವಶ್ಯಕತೆಗಳನ್ನು ಸಮತೋಲನಗೊಳಿಸುವತ್ತ ಮತ್ತೊಂದು ಹೆಜ್ಜೆ ಇಟ್ಟಿದೆ.