ತಡಿಯಂಡಮೋಳ್ ಬೆಟ್ಟದ ಚಾರಣಕ್ಕೆ ಹೋಗಿದ್ದ ಯುವತಿ ಕಣ್ಮರೆ 40 ಸಿಬ್ಬಂದಿಯ ಹೆಚ್ಚುವರಿ ತಂಡ ಡ್ರೋನ್ ಶೋಧ : ಈಶ್ವರ ಖಂಡ್ರೆ
ಕೊಡಗಿನ ತಡಿಯಂಡಮೋಳ್ ಗೆ ಚಾರಣಕ್ಕೆ ಬಂದಿದ್ದ ಕೇರಳದ ಯುವತಿ ಜಿ.ಎಸ್.ಶರಣ್ಯ (36) ನಾಪತ್ತೆಯಾಗಿದ್ದು ಪತ್ತೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದು, ಇಂದು ಹೆಚ್ಚುವರಿಯಾಗಿ 40 ಸಿಬ್ಬಂದಿಯ 4 ತಂಡ ನಿಯೋಜಿಸಲು ಹಾಗೂ ಡ್ರೋನ್ ಕ್ಯಾಮರಾ ಬಳಸುವಂತೆ ತಿಳಿಸಲಾಗಿದ್ದು, ಒಟ್ಟು 9 ತಂಡದಿಂದ ಕಾರ್ಯಾಚರಣೆ ನಡೆಯುತ್ತಿದೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಚಾರಣಕ್ಕಾಗಿ ಕೇರಳದಿಂದ ಒಬ್ಬರೇ ಆಗಮಿಸಿ, ಕಕ್ಕಬ್ಬೆ ಗ್ರಾಮದಲ್ಲಿ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದ ಶರಣ್ಯ ಅವರು ಗೈಡ್ ಹಾಗೂ ಇನ್ನಿತರ 15 ಚಾರಣಿಗರೊಂದಿಗೆ ಕಳೆದ ಗುರುವಾರ (ಏ.2) ಕೊಡಗಿನ ಎತ್ತರದ ಗಿರಿಶ್ರೇಣಿ ತಡಿಯಂಡಮೋಳ್ ಬೆಟ್ಟಕ್ಕೆ ತೆರಳಿದ್ದರು. ಅಂದು ಮಧ್ಯಾಹ್ನ ಆಕೆ ಕಾಣೆಯಾಗಿದ್ದು, ವಿಷಯ ತಿಳಿದ ಕೂಡಲೇ ಪೊಲೀಸರು, ನಕ್ಸಲ್ ನಿಗ್ರಹದಳ, ಶ್ವಾನದಳ ಮತ್ತು ಅರಣ್ಯ ಸಿಬ್ಬಂದಿ ಸೇರಿ 50 ಜನರ ಐದು ತಂಡಗಳು ಶೋಧ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಗುರುವಾರ ಕೊನೆಯದಾಗಿ ದೂರವಾಣಿ ಮೂಲಕ ಹೋಂಸ್ಟೇ ಸಂಪರ್ಕಿಸಿರುವ ಯುವತಿ, ತಾವು ದಾರಿತಪ್ಪಿದ್ದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ. ಅವರ ಫೊನ್ ಲೊಕೇಷನ್ ಆಧರಿಸಿ ಶೋಧ ನಡೆಸಲಾಗುತ್ತಿದೆ. ಸ್ಥಳೀಯ ಬುಡಕಟ್ಟು ಜನರೂ ನೆರವಿಗೆ ಧಾವಿಸಿದ್ದು, ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮರಾಗಳ ನೆರವೂ ಪಡೆಯಲಾಗಿದೆ, ಇಂದಿನಿಂದ ಹೆಚ್ಚುವರಿ ತಂಡ ನಿಯೋಜಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.