ಶಕ್ತಿ’ ಯೋಜನೆ ಮಾದರಿಯಲ್ಲಿ ಗಂಡು ಮಕ್ಕಳಿಗೂ ಉಚಿತ ಬಸ್ ಸೌಲಭ್ಯ?
ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಹತ್ವದ ಸೌಲಭ್ಯ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ’ ಜಾರಿಗೆ ತರಲು ಸಜ್ಜಾಗಿದೆ. ಇದರ ಭಾಗವಾಗಿ 12ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ವಿಸ್ತರಿಸುವ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ.
ಈಗಾಗಲೇ ಜಾರಿಯಲ್ಲಿರುವ ‘ಶಕ್ತಿ’ ಯೋಜನೆಯಡಿ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಲಭ್ಯವಿದ್ದು, ಇದೀಗ ಇದೇ ಸೌಲಭ್ಯವನ್ನು ಲಿಂಗ ಭೇದವಿಲ್ಲದೆ ಗಂಡು ಮಕ್ಕಳಿಗೂ ವಿಸ್ತರಿಸುವ ಪ್ರಸ್ತಾವನೆ ಮುಂದಿಟ್ಟಲಾಗಿದೆ.
ಈ ಯೋಜನೆಯ ಪ್ರಮುಖ ಉದ್ದೇಶ ಶಾಲಾ ಮಕ್ಕಳಿಗೆ ಸುರಕ್ಷಿತ ಹಾಗೂ ಸುಲಭ ಸಂಚಾರ ವ್ಯವಸ್ಥೆ ಕಲ್ಪಿಸುವುದಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದು ಹೆಚ್ಚಿನ ನೆರವಾಗಲಿದ್ದು, ಶಾಲೆಗೆ ಹೋಗುವ ಖರ್ಚಿನ ಭಾರವನ್ನು ಕಡಿಮೆ ಮಾಡುವುದು ಹಾಗೂ ಶಾಲೆ ಬಿಡುವವರ ಪ್ರಮಾಣವನ್ನು ತಗ್ಗಿಸುವುದು ಸರ್ಕಾರದ ಉದ್ದೇಶವಾಗಿದೆ.
ರಾಜ್ಯ ಸಾರಿಗೆ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಸಮನ್ವಯದೊಂದಿಗೆ ಈ ಯೋಜನೆಯ ಪ್ರಸ್ತಾವನೆ ರೂಪುಗೊಂಡಿದ್ದು, ಮಕ್ಕಳ ಸುರಕ್ಷತೆ ಮತ್ತು ಅನುಕೂಲಕರ ಸಂಚಾರದ ದೃಷ್ಟಿಯಿಂದ ಉನ್ನತ ಮಟ್ಟದ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ. ಅವುಗಳಲ್ಲಿ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಅಥವಾ ಸಂಪೂರ್ಣ ಉಚಿತ ಪ್ರಯಾಣ ಒದಗಿಸುವುದು ಪ್ರಮುಖವಾಗಿದೆ.
ಪ್ರಸ್ತುತ ಯೋಜನೆ ಸರ್ಕಾರದ ಮಟ್ಟದಲ್ಲಿ ಚರ್ಚೆಯ ಹಂತದಲ್ಲಿದ್ದು, ಹಣಕಾಸು ಇಲಾಖೆಯ ಅನುಮೋದನೆ ಪಡೆದ ಬಳಿಕ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಯೋಜನೆ ಜಾರಿಗೆ ಬಂದಲ್ಲಿ, ರಾಜ್ಯದ ಸಾರ್ವಜನಿಕ ಸಾರಿಗೆ ಇತಿಹಾಸದಲ್ಲಿ ಇದು ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ.