ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಜಾತ್ರೆ ಜತೆಗೆ ಬಿಸು ಸಂಭ್ರಮ
ದಲ್ಲಿ ಸೌರಮಾನ ಯುಗಾದಿ (ವಿಷು/ಬಿಸು) ಪ್ರಯುಕ್ತ ಜಾತ್ರಾ ಉತ್ಸವದೊಂದಿಗೆ ವಿಶೇಷ ಧಾರ್ಮಿಕ ಆಚರಣೆಗಳು ಎಪ್ರಿಲ್ 15ರಂದು ಸಾಂಪ್ರದಾಯಿಕ ವೈಭವದಲ್ಲಿ ನಡೆಯಲಿವೆ.
ತುಳುನಾಡಿನ ಸಂಪ್ರದಾಯದಂತೆ ಮೇಷ ಸಂಕ್ರಮಣದ ಅಂಗವಾಗಿ ಹೊಸ ವರ್ಷವನ್ನು ಸ್ವಾಗತಿಸುವ ಈ ಸಂದರ್ಭದಲ್ಲಿ, ರಾತ್ರಿ ದೇವರ ದೈನಂದಿನ ಪೇಟೆ ಸವಾರಿ ಬಳಿಕ ಮಳೆ-ಬೆಳೆ ಸಮೃದ್ಧಿಯಾಗಲೆಂದು ತಂತ್ರಿಗಳ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ನಂತರ ಫಲಪುಷ್ಪಾದಿ ಸುವಸ್ತುಗಳನ್ನು ದರ್ಪಣದೊಂದಿಗೆ ಗರ್ಭಗುಡಿಯಲ್ಲಿ ಇರಿಸಿ ಬಾಗಿಲು ಮುಚ್ಚಲಾಗುತ್ತದೆ.
ವಿಷು ದಿನ ಪ್ರಾತಃಕಾಲದಲ್ಲಿ ಗರ್ಭಗುಡಿ ಬಾಗಿಲು ತೆರೆಯಲಾಗುತ್ತಿದ್ದು, ದರ್ಪಣ ಬಿಂಬ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ. ದೇವಾಲಯದ ಒಳಾಂಗಣವನ್ನು ತಳಿರು ತೋರಣಗಳಿಂದ ಅಲಂಕರಿಸಿ, ಚಪ್ಪರ ವ್ಯವಸ್ಥೆ ಮಾಡಲಾಗುತ್ತದೆ.
ಬೆಳಗ್ಗೆ ವಿಶೇಷ ಉತ್ಸವ ಬಲಿ ಮತ್ತು ವಸಂತ ಕಟ್ಟೆ ಪೂಜೆ ನಡೆಯಲಿದ್ದು, ಸಂಜೆ ತುಳು ಪಂಚಾಂಗ ಸಂಪ್ರದಾಯದಂತೆ ‘ಬಯ್ಯದ ಬಲಿ’ ನಡೆಯುತ್ತದೆ. ಬಳಿಕ ದೇವರ ಸಾಂಪ್ರದಾಯಿಕ ಚಂದ್ರಮಂಡಲ ಉತ್ಸವ (ಬಂಡಿ ಉತ್ಸವ) ಜರುಗಲಿದೆ. ಈ ಉತ್ಸವದಲ್ಲಿ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಿ ಭಕ್ತರ ನಡುವೆ ಸಾಗಿಸಲಾಗುತ್ತದೆ.
ವಿಷುಕಣಿಯ ಅಂಗವಾಗಿ ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆಯಲ್ಲಿ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸೌರಯುಗಾದಿ ದಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಅನ್ನಪ್ರಸಾದ ಸ್ವೀಕರಿಸುವುದು ಪುತ್ತೂರು ಸೀಮೆಯ ಜನರ ಪ್ರಮುಖ ಆಚರಣೆಯಾಗಿದೆ.
ಇದೇ ದಿನ ರಾತ್ರಿ ಪೇಟೆ ಸವಾರಿ ಬನ್ನೂರು, ಅಶೋಕನಗರ ಮತ್ತು ರೈಲ್ವೇ ಮಾರ್ಗಗಳಲ್ಲಿ ಸಂಚರಿಸಲಿದ್ದು, ಜಾತ್ರೆಯ ಸಂಭ್ರಮ ಮತ್ತಷ್ಟು ಹೆಚ್ಚಲಿದೆ.