Home Uncategorizedಪುತ್ತೂರು ಮಹಾಲಿಂಗೇಶ್ವರ ಜಾತ್ರೆ: ಮದ್ಯ ಮಾರಾಟ ನಿಷೇಧ, ಸಂಚಾರದಲ್ಲಿ ಬದಲಾವಣೆ

ಪುತ್ತೂರು ಮಹಾಲಿಂಗೇಶ್ವರ ಜಾತ್ರೆ: ಮದ್ಯ ಮಾರಾಟ ನಿಷೇಧ, ಸಂಚಾರದಲ್ಲಿ ಬದಲಾವಣೆ

by anamika

ಪುತ್ತೂರು ಮಹಾಲಿಂಗೇಶ್ವರ ಜಾತ್ರೆ: ಮದ್ಯ ಮಾರಾಟ ನಿಷೇಧ, ಸಂಚಾರದಲ್ಲಿ ಬದಲಾವಣೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ಎಪ್ರಿಲ್ 16ರಿಂದ 18ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆಯ ಹಿನ್ನೆಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಎಪ್ರಿಲ್ 16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭೇಟಿ, ಕೆರೆೋತ್ಸವ ಹಾಗೂ ತೆಪ್ಪೋತ್ಸವ, ಎಪ್ರಿಲ್ 17ರಂದು ಬ್ರಹ್ಮರಥೋತ್ಸವ ಮತ್ತು ಎಪ್ರಿಲ್ 18ರಂದು ವೀರಮಂಗಲದಲ್ಲಿ ಅವಭೃತ ಸ್ನಾನ ನಡೆಯಲಿದೆ.

ಮದ್ಯ ಮಾರಾಟ ನಿಷೇಧ
ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿರುವ ಎಲ್ಲಾ ಬಾರ್ ಹಾಗೂ ವೈನ್‌ಶಾಪ್‌ಗಳನ್ನು ಎಪ್ರಿಲ್ 17ರ ಬೆಳಿಗ್ಗೆ 6 ಗಂಟೆಯಿಂದ ಎಪ್ರಿಲ್ 18ರ ಬೆಳಿಗ್ಗೆ 6 ಗಂಟೆಯವರೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ. ಈ ಅವಧಿಯಲ್ಲಿ ಎಲ್ಲಾ ರೀತಿಯ ಅಮಲು ಪದಾರ್ಥಗಳ ಮಾರಾಟಕ್ಕೂ ನಿಷೇಧ ವಿಧಿಸಲಾಗಿದೆ.

ಸಂಚಾರ ಮಾರ್ಗ ಬದಲಾವಣೆ
ಜಾತ್ರೆ ಪ್ರಯುಕ್ತ ಎಪ್ರಿಲ್ 16 ಹಾಗೂ 17ರಂದು ಸಂಜೆ 4 ಗಂಟೆಯಿಂದ ಪುತ್ತೂರು ನಗರ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

  • ಸಂಪ್ಯ ಕಡೆಯಿಂದ ಮಂಗಳೂರು-ಕಬಕ ಕಡೆಗೆ ತೆರಳುವ ವಾಹನಗಳು ಅಶ್ವಿನಿ ಜಂಕ್ಷನ್ – ದರ್ಬೆ – ಬೆದ್ರಾಳ – ಸಾಲ್ಮರ – ಪಡೀಲ್ ಮಾರ್ಗ ಬಳಸಬೇಕು.
  • ಮಂಗಳೂರು–ವಿಟ್ಲ–ಕಬಕ ಕಡೆಯಿಂದ ಬರುವ ವಾಹನಗಳು ಲಿನೆಟ್ – ಬೊಳುವಾರು – ಪಡೀಲ್ – ಕೊಟೆಚಾಹಾಲ್ ಕ್ರಾಸ್ – ಸಾಲ್ಮರ – ಎಪಿಎಂಸಿ – ದರ್ಬೆ – ಅಶ್ವಿನಿ ಜಂಕ್ಷನ್ ಮೂಲಕ ಸಂಚರಿಸಬೇಕು.

ಬಸ್ ಮಾರ್ಗ ಬದಲಾವಣೆ
ಬಸ್ ನಿಲ್ದಾಣದಿಂದ ಹೊರಡುವ ಎಲ್ಲಾ ಸಾರಿಗೆ ಬಸ್‌ಗಳು ಎಂ.ಟಿ. ರಸ್ತೆ – ಪರ್ಲಡ್ಕ ಬೈಪಾಸ್ ಮೂಲಕ ಸಂಚರಿಸಬೇಕು. ಇತರೆ ಮಾರ್ಗಗಳಿಂದ ಬರುವ ಬಸ್‌ಗಳಿಗೆ ಸಹ ಪರ್ಯಾಯ ಮಾರ್ಗಗಳನ್ನು ನಿಗದಿ ಮಾಡಲಾಗಿದೆ.

ಆಟೋರಿಕ್ಷಾ ಸಂಚಾರ ನಿಯಂತ್ರಣ
ನೆಹರೂನಗರ, ದರ್ಬೆ ಹಾಗೂ ಪರ್ಲಡ್ಕ ಭಾಗಗಳಿಂದ ಬರುವ ಆಟೋರಿಕ್ಷಾಗಳಿಗೆ ನಿಗದಿತ ಸ್ಥಳಗಳಲ್ಲಿ ಮಾತ್ರ ಪ್ರಯಾಣಿಕರನ್ನು ಇಳಿಸಲು ಸೂಚನೆ ನೀಡಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ
ಭಕ್ತರ ವಾಹನಗಳಿಗಾಗಿ ಎಪಿಎಂಸಿ ಆವರಣ, ಕೊಂಬೆಟ್ಟು ಬೋರ್ಡ್ ಹೈಸ್ಕೂಲ್ ಮೈದಾನ, ಬಂಟರ ಭವನ, ನೆಲ್ಲಿಕಟ್ಟೆ ಶಾಲಾ ಮೈದಾನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇತರೆ ಮಾರ್ಗಗಳಿಂದ ಬರುವ ವಾಹನಗಳಿಗೆ ತೆಂಕಿಲ ಹಾಗೂ ಜೈನ ಭವನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಜಾತ್ರೆಯ ಸಮಯದಲ್ಲಿ ಸಾರ್ವಜನಿಕರು ಪೊಲೀಸರ ಮತ್ತು ಆಡಳಿತದ ಸೂಚನೆಗಳನ್ನು ಪಾಲಿಸಿ ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

You may also like

Leave a Comment