Home Uncategorizedಋತುಸ್ರಾವ ರಜೆ ಕಡ್ಡಾಯ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

ಋತುಸ್ರಾವ ರಜೆ ಕಡ್ಡಾಯ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

by anamika

ಋತುಸ್ರಾವ ರಜೆ ಕಡ್ಡಾಯ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

ಬೆಂಗಳೂರು: ಮಹಿಳೆಯರ ಆರೋಗ್ಯ, ಗೌರವ ಮತ್ತು ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವ ದಿಸೆಯಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. 18ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ‘ಋತುಸ್ರಾವ ರಜೆ’ ನೀಡುವ ನೀತಿಯನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಈ ಕುರಿತು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಸ್ಪಷ್ಟವಾಗಿ ಹೇಳಿದ್ದು, ಮಹಿಳೆಯರ ಋತುಸ್ರಾವದ ಆರೋಗ್ಯವು ಸಂವಿಧಾನದ ವಿಧಿ 21ರಡಿ ಬರುವ ‘ಬದುಕುವ ಹಕ್ಕಿನ’ ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ರಜೆ ನೀಡುವ ವಿಚಾರವಲ್ಲ, ಮಹಿಳೆಯರ ಘನತೆ ಮತ್ತು ಮಾನವೀಯ ಹಕ್ಕುಗಳಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ನಿರ್ದೇಶನದಂತೆ, ನೋಂದಾಯಿತ ಎಲ್ಲಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಶಾಶ್ವತ, ಗುತ್ತಿಗೆ ಹಾಗೂ ಹೊರಗುತ್ತಿಗೆ ಮಹಿಳಾ ನೌಕರರಿಗೆ ಈ ಸೌಲಭ್ಯ ಅನ್ವಯವಾಗಬೇಕು. ಸಾಫ್ಟ್‌ವೇರ್ ಕಂಪನಿಗಳಷ್ಟೇ ಅಲ್ಲದೆ, ಹೋಟೆಲ್ ಉದ್ಯೋಗಿಗಳು, ದಿನಗೂಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಮಹಿಳೆಯರಿಗೂ ಈ ರಜೆ ಲಭ್ಯವಾಗುವಂತೆ ಸರ್ಕಾರ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಸೂಚಿಸಲಾಗಿದೆ.

ಈ ಹಿಂದೆ ರಾಜ್ಯ ಸರ್ಕಾರ ಋತುಸ್ರಾವ ರಜೆಗೆ ಅನುಮೋದನೆ ನೀಡಿದ್ದರೂ, ಅನೇಕ ಸಂಸ್ಥೆಗಳು ಅದನ್ನು ಸಮರ್ಪಕವಾಗಿ ಜಾರಿಗೊಳಿಸದ ಹಿನ್ನೆಲೆ, ಕಡ್ಡಾಯ ಅನುಷ್ಠಾನಕ್ಕೆ ಹೈಕೋರ್ಟ್ ಒತ್ತಾಯಿಸಿದೆ.

ಇದಲ್ಲದೆ, ಪ್ರಸ್ತಾವಿತ ‘ಕರ್ನಾಟಕ ಋತುಸ್ರಾವ ರಜೆ ಮತ್ತು ನೈರ್ಮಲ್ಯ ವಿಧೇಯಕ–2025’ ಅನ್ನು ಶೀಘ್ರವೇ ಕಾನೂನಾಗಿ ರೂಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಈ ತೀರ್ಪು ಮಹಿಳಾ ಉದ್ಯೋಗಿಗಳ ಕಲ್ಯಾಣ ಮತ್ತು ಸಮಾನತೆಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

You may also like

Leave a Comment