SSLC Exam Result 2026: ಏಪ್ರಿಲ್ 24-25ಕ್ಕೆ ಫಲಿತಾಂಶ ಸಾಧ್ಯತೆ; ಮಧು ಬಂಗಾರಪ್ಪ ಪ್ರತಿಕ್ರಿಯೆ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಣೆಗಾಗಿ ದಿನಗಣನೆ ಆರಂಭವಾಗಿದೆ. ಸುಮಾರು 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಆತುರದಿಂದ ಕಾಯುತ್ತಿದ್ದಾರೆ. ಸದ್ಯ ಸಂಭಾವ್ಯ ದಿನಾಂಕವಾಗಿ ಏಪ್ರಿಲ್ 24 ಅಥವಾ 25 ಅನ್ನು ನಿರೀಕ್ಷಿಸಲಾಗಿದೆ.
ಈ ಕುರಿತು ಶಿಕ್ಷಣ ಸಚಿವ ಪ್ರತಿಕ್ರಿಯೆ ನೀಡಿದ್ದು, ಪೂರ್ವದಲ್ಲಿ ತಿಳಿಸಿದಂತೆ ಏಪ್ರಿಲ್ 24ರಲ್ಲೇ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆದಿದ್ದು, ಒಟ್ಟು 9,02,889 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 8,12,855 ಮಂದಿ ಹೊಸಬರು, 62,845 ಮಂದಿ ಪುನರಾವರ್ತಿತ ಅಭ್ಯರ್ಥಿಗಳು ಹಾಗೂ 27,189 ಮಂದಿ ಖಾಸಗಿ ಅಭ್ಯರ್ಥಿಗಳು ಸೇರಿದ್ದಾರೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಣೆ ಮಾತ್ರ ಬಾಕಿಯಿದೆ.
ತೃತೀಯ ಭಾಷೆ ವಿವಾದದ ಪರಿಣಾಮ
ಈ ಬಾರಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ನೀಡಲು ಸರ್ಕಾರ ನಿರ್ಧರಿಸಿತ್ತು. ಆದರೆ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದ್ದು, ವಿಚಾರಣೆ ನಡೆಸಿದ ಈ ವರ್ಷ ತೃತೀಯ ಭಾಷೆಗೂ ಅಂಕಗಳನ್ನು ನೀಡಬೇಕು ಎಂದು ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸುವುದೇ ಅಥವಾ ಪಾಲಿಸುವುದೇ ಎಂಬುದರ ಮೇಲೆ ಫಲಿತಾಂಶ ದಿನಾಂಕ ಅವಲಂಬಿತವಾಗಿದೆ. ಆದೇಶವನ್ನು ಪ್ರಶ್ನಿಸಿದರೆ ಫಲಿತಾಂಶದಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದ್ದು, ಪಾಲಿಸಿದರೆ ನಿಗದಿತ ದಿನಾಂಕದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ.
ಒಟ್ಟಾರೆ, ವಿದ್ಯಾರ್ಥಿಗಳು ಇನ್ನೂ ಕೆಲವು ದಿನಗಳಲ್ಲಿ ಫಲಿತಾಂಶ ನಿರೀಕ್ಷಿಸಬಹುದಾಗಿದೆ.