ಕರ್ನಾಟಕದಲ್ಲಿ ತೈಲ ಮತ್ತು ಅನಿಲ ಪೂರೈಕೆ ಸಂಪೂರ್ಣ ಸ್ಥಿರ: ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಜಾಗತಿಕ ವಿದ್ಯಮಾನಗಳ ನಡುವೆಯೂ ಕರ್ನಾಟಕದಲ್ಲಿ ತೈಲ ಮತ್ತು ಅನಿಲ ಪೂರೈಕೆ ವ್ಯವಸ್ಥೆ ಸದೃಢವಾಗಿದೆ. ರಾಜ್ಯವು ಸುಸಂಘಟಿತ ಪೆಟ್ರೋಲಿಯಂ ಮೂಲಸೌಕರ್ಯವನ್ನು ಹೊಂದಿದ್ದು, ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ತೈಲ ಮಾರುಕಟ್ಟೆ ಕಂಪನಿಗಳು (OMCs) ಸ್ಪಷ್ಟಪಡಿಸಿವೆ.

ಭಾರತ ಸರ್ಕಾರದ ವಾರ್ತಾ ಶಾಖೆ (PIB) ಹಾಗೂ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಗೇಲ್ ಇಂಡಿಯಾ ಕಂಪನಿಗಳು ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಈ ಭರವಸೆ ನೀಡಲಾಗಿದೆ.
ಮುಖ್ಯಾಂಶಗಳು:
ಸುಭದ್ರ ಮೂಲಸೌಕರ್ಯ: ಕರ್ನಾಟಕವು ವಾರ್ಷಿಕ 15 MMTPA (ಮಿಲಿಯನ್ ಮೆಟ್ರಿಕ್ ಟನ್) ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯದ ಬೃಹತ್ ಸಂಸ್ಕರಣಾಗಾರವನ್ನು ಹೊಂದಿದೆ.
ಕೊರತೆಯಿಲ್ಲದ ಸರಬರಾಜು: ರಾಜ್ಯದ ಯಾವುದೇ ಮೂಲೆಯಲ್ಲೂ ಪೆಟ್ರೋಲ್ ಅಥವಾ ಡೀಸೆಲ್ ಕೊರತೆಯಿಲ್ಲ. ಎಲ್ಲಾ ರಿಟೇಲ್ ಮಾರಾಟ ಮಳಿಗೆಗಳು (ಪೆಟ್ರೋಲ್ ಬಂಕ್‌ಗಳು) ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಅಡೆತಡೆಯಿಲ್ಲದ ಸರಣಿ: ಸಂಸ್ಕರಣಾಗಾರಗಳಿಂದ ಟರ್ಮಿನಲ್, ಡಿಪೋ ಹಾಗೂ ಗ್ರಾಹಕರ ಕೈ ತಲುಪುವವರೆಗೆ ಪೂರೈಕೆ ಸರಣಿ ಅತ್ಯಂತ ಸುಗಮವಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಾರ್ಯಕಾರಿ ನಿರ್ದೇಶಕ ಸಿದ್ಧಾರ್ಥ ಅಗರವಾಲ್ ತಿಳಿಸಿದ್ದಾರೆ.
ಎಲ್ಪಿಜಿ (LPG) ವಿತರಣೆ ಈಗ ಸುಗಮ:
ಗೃಹಬಳಕೆಯ ಸಿಲಿಂಡರ್‌ಗಳ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ಮಾರ್ಚ್ ತಿಂಗಳಲ್ಲಿ ಆತಂಕದ ಕಾರಣದಿಂದಾಗಿ ಜನರು ಮುಗಿಬಿದ್ದು ಬುಕ್ಕಿಂಗ್ ಮಾಡಿದ್ದರಿಂದ ಬೇಡಿಕೆ ದಿನಕ್ಕೆ 3.75 ಲಕ್ಷಕ್ಕೆ ಏರಿಕೆಯಾಗಿತ್ತು. ಇದರಿಂದ ವಿತರಣೆಯಲ್ಲಿ ಸಣ್ಣ ಮಟ್ಟದ ವಿಳಂಬವಾಗಿತ್ತು. ಆದರೆ ಪ್ರಸ್ತುತ ಬುಕ್ಕಿಂಗ್ ಸಂಖ್ಯೆ 3.06 ಲಕ್ಷಕ್ಕೆ ಇಳಿಕೆಯಾಗಿದ್ದು, ವಿತರಣಾ ವ್ಯವಸ್ಥೆ ಸಂಪೂರ್ಣ ಸುಧಾರಿಸಿದೆ ಎಂದು ಸ್ಪಷ್ಟಪಡಿಸಿದರು.
ತೈಲ ಕಂಪನಿಗಳ ಮನವಿ: ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಹಾಗೂ ಅಗತ್ಯಕ್ಕಿಂತ ಹೆಚ್ಚಿನ ಇಂಧನವನ್ನು ಸಂಗ್ರಹಿಸಿ ಆತಂಕ ಸೃಷ್ಟಿಸಬಾರದು. ರಾಜ್ಯದಲ್ಲಿ ಇಂಧನ ದಾಸ್ತಾನು ಸಮರ್ಪಕವಾಗಿದೆ.