ಅಮೆರಿಕ ಅಧ್ಯಕ್ಷ ಟ್ರಂಪ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ಅಮೆರಿಕ ಶ್ವೇತಭವನದ ವರದಿಗಾರರ ಭೋಜನ ಕೂಟದ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ. ತಕ್ಷಣವೇ ಭದ್ರತಾ ಸಿಬ್ಬಂದಿಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ಥಳಾಂತರಿಸಿದರು.
AFP ಮಾಧ್ಯಮದ ವರದಿ ಪ್ರಕಾರ, ಕಾರ್ಯಕ್ರಮದ ಸಮಯದಲ್ಲೇ ಗುಂಡು ಹಾರಿಸಲಾಗಿದೆ ಎಂದು ಕ್ಯಾಬಿನೆಟ್ ಸದಸ್ಯರೊಬ್ಬರು ಹೇಳಿದ್ದು, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂದಿದ್ದಾರೆ. ಗುಂಡು ಹಾರಿಸಿರುವ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಎಫ್ ಪಿ ವರದಿ ಮಾಡಿದೆ.
ಶನಿವಾರ ರಾತ್ರಿ ವಾಷಿಂಗ್ಟನ್ ಹಿಲ್ಟನ್‌ನಲ್ಲಿ ನಡೆದ ಶ್ವೇತಭವನದ ವರದಿಗಾರರ ಭೋಜನ ಕೂಟದ ಸಂದರ್ಭದಲ್ಲಿ ಗುಂಡು ಹಾರಿಸಲಾಗಿದೆ. ಭಾರಿ ಜನ ಸೇರಿದ್ದ ಸಭೆಯಲ್ಲಿ ತಕ್ಷಣವೇ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರ ಪತ್ನಿ ಮೆಲಾನಿಯಾ ಟ್ರಂಪ್, ಹಾಗೂ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ರಕ್ಷಣಾ ತಂಡಗಳು ತಕ್ಷಣವೇ ಬಾಲ್‌ರೂಂ ನಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಮಾಹಿತಿ ಪ್ರಕಾರ, ಐದರಿಂದ ಎಂಟು ಗುಂಡು ಹಾರಿಸಲಾಗಿದೆ, ಆದರೆ ಯಾರಿಗೂ ಗಾಯಗಳಾಗಿಲ್ಲ. ಭದ್ರತಾ ಸಿಬ್ಬಂದಿಗಳು ಅಲರ್ಟ್ ಮಾಡಿದ ತಕ್ಷಣ ಎಲ್ಲ ಅತಿಥಿಗಳು, ಟೇಬಲ್ ಕೆಳಗೆ ಕುಳಿತುಕೊಂಡರು, ತಕ್ಷಣವೇ ಸಭಾಂಗಣವನ್ನೂ ತೊರೆದರು ಎನ್ನಲಾಗಿದೆ.
ಭದ್ರತಾ ಸಿಬ್ಬಂದಿಗಳು ತಕ್ಷಣವೇ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವನ್ನು ಲಾಕ್‌ಡೌನ್ ಮಾಡಿ, ಎಲ್ಲಾ ಅತಿಥಿಗಳನ್ನು ಹೊರಹೋಗಲು ಅನುವು ಮಾಡಿಕೊಟ್ಟರಲ್ಲದೆ ಯಾರೂ ಒಳಬಾರದಂತೆ ಎಚ್ಚರಿಕೆ ವಹಿಸಿದರು. ಭೋಜನ ಕೂಟದಲ್ಲಿ ಪತ್ರಕರ್ತರು, ಸೆಲೆಬ್ರೆಟಿಗಳು ಹಾಗೂ ರಾಷ್ಟ್ರೀಯ ನಾಯಕರುಗಳು ಭಾಗಿಯಾಗಿದ್ದರು.
ಟ್ರಂಪ್ ಪ್ರತಿಕ್ರಿಯೆ ಏನು?
ಘಟನೆ ಬಳಿಕ ಟ್ರುಥ್ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್ ಡಿಸಿ ಸೀಕ್ರೆಟ್ ಸರ್ವಿಸ್ ಅದ್ಭುತವಾಗಿ ಕೆಲಸ ಮಾಡಿದೆ. ತ್ವರಿಸತವಾಗಿ ಹಾಗೂ ಧೈರ್ಯದಿಂದ ಕೆಲಸ ಮಾಡಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಪ್ರದರ್ಶನವನ್ನು ಮುಂದುವರಿಸಲು ಬಿಡಿ ( let the show go on) ಎಂದು ಶಿಫಾರಸ್ಸು ಮಾಡಿರುವುದಾಗಿ ಹೇಳಿದ್ದಾರೆ. ಇದು ಭದ್ರತಾ ಸಿಬ್ಬಂಧಿಗಳ ನಿರ್ಧಾರದ ಮೇಲೆ ನಿಂತಿದೆ. ಆದರೆ ವಾರ್ಷಿಕವಾಗಿ ನಡೆಯುವ ಈ ಕಾರ್ಯಕ್ರಮ, ಮತ್ತೊಮ್ಮೆ ನಡೆಯಬೇಕು, ಬೇರೆ ರೀತಿ ಪ್ಲ್ಯಾನ್ ಮಾಡಬೇಕು ಎಂದಿದ್ದಾರೆ.
ಈ ಹಿಂದೆ ಜುಲೈ 13, 2024 ರಂದು ಪೆನ್ಸಿಲ್ವೇನಿಯಾದ ಬಟ್ಲರ್ ನಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಟ್ರಂಪ್ ಭಾಷಣದ ವೇಳೆ ಗುಂಡಿನ ದಾಳಿಯಾಗಿತ್ತು. ಆದರೆ ಸಾರ್ವಜನಿಕನೊಬ್ಬ ಮೃತಪಟ್ಟಿದ್ದ. ಇದೀಗ ಅಧಿಕಾರಕ್ಕೇರಿದ ಬಳಿಕ ಮತ್ತೊಮ್ಮೆ ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದಿದೆ.