📰 ಮಮತಾಗೆ ರಾಜ್ಯಪಾಲರ ಗೇಟ್‌ಪಾಸ್? ಬಂಗಾಳ ರಾಜಕೀಯದಲ್ಲಿ ಭಾರೀ ತಿರುವು!
📍ಕೋಲ್ಕತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ರಾಜ್ಯಪಾಲ ಆರ್.ಎನ್. ರವಿ ಅವರು ವಿಧಾನಸಭೆಯನ್ನು ವಿಸರ್ಜಿಸಿರುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಚುನಾವಣೆಯಲ್ಲಿ ಭಾರೀ ಸೋಲು ಅನುಭವಿಸಿದ್ದರೂ ಮುಖ್ಯಮಂತ್ರಿ ಸ್ಥಾನ ತೊರೆಯುವುದಿಲ್ಲ ಎಂದು ಹೇಳಿದ್ದ ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ರಾಜಕೀಯ ಹಿನ್ನಡೆ ಎದುರಾಗಿದೆ.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ 207 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಟಿಎಂಸಿ ಕೇವಲ 80 ಸ್ಥಾನಗಳಿಗೆ ಸೀಮಿತವಾಗಿತ್ತು. ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದರು.
⚖️ “ಸಿಎಂ ಅಲ್ಲ, ಶಾಸಕಿ ಅಲ್ಲ” – ದೀದಿ ಈಗ ಬೀದಿ ಹೋರಾಟಕ್ಕೆ?
ಚುನಾವಣೆ ಫಲಿತಾಂಶವನ್ನು ರಾಜಕೀಯ ಪಿತೂರಿ ಎಂದು ಆರೋಪಿಸಿದ್ದ ಮಮತಾ ಬ್ಯಾನರ್ಜಿ, “ನಾನು ಈಗ ಸ್ವತಂತ್ರ ಹಕ್ಕಿ… ಬೀದಿಗಿಳಿದು ಹೋರಾಟ ಮಾಡುತ್ತೇನೆ” ಎಂದು ಹೇಳಿಕೆ ನೀಡಿದ್ದರು. ಆದರೆ ವಿಧಾನಸಭೆ ವಿಸರ್ಜನೆಯೊಂದಿಗೆ ಹೊಸ ಸರ್ಕಾರ ರಚನೆಗೆ ದಾರಿ ಸುಗಮವಾಗಿದ್ದು, ಟಿಎಂಸಿ ಭವಿಷ್ಯದ ಬಗ್ಗೆ ಚರ್ಚೆಗಳು ಜೋರಾಗಿವೆ.
👩⚖️ ಮಮತಾ ಮತ್ತೆ ವಕೀಲಿಕೆಗೆ?
ರಾಜಕೀಯ ವಲಯದಲ್ಲಿ ಇದೀಗ ಮತ್ತೊಂದು ಕುತೂಹಲಕಾರಿ ಚರ್ಚೆ ಆರಂಭವಾಗಿದೆ. ವಿಧಾನಸಭೆಗೆ ಆಯ್ಕೆಯಾಗದ ಮಮತಾ ಬ್ಯಾನರ್ಜಿ ಮತ್ತೆ ತಮ್ಮ ಹಳೆಯ ವಕೀಲ ವೃತ್ತಿಗೆ ಮರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚುನಾವಣಾ ಸೋಲು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ವಾದ ಮಂಡಿಸುವ ಯೋಚನೆಯಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಇತ್ತೀಚೆಗೆ ಪಕ್ಷದ ಶಾಸಕರ ಸಭೆಯಲ್ಲಿಯೂ ಮಮತಾ “ಮತ್ತೆ ವಕೀಲಿಕೆ ಆರಂಭಿಸುವ” ಕುರಿತು ಮಾತುಕತೆ ನಡೆಸಿದ್ದು, ಕೆಲ ನಾಯಕರಿಗೂ ಅದೇ ಸಲಹೆ ನೀಡಿದ್ದಾರಂತೆ. ಕಳೆದ ಫೆಬ್ರವರಿಯಲ್ಲಿ ಮತಪಟ್ಟಿ ಪರಿಷ್ಕರಣೆ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಸ್ವತಃ ವಾದ ಮಂಡಿಸಿದ್ದದ್ದು ದೇಶದ ರಾಜಕೀಯ ಇತಿಹಾಸದಲ್ಲೇ ವಿಶೇಷ ಘಟನೆ ಆಗಿತ್ತು.
🔥 ಬಂಗಾಳದಲ್ಲಿ ಬಿಜೆಪಿ ಯುಗ ಆರಂಭವೇ?
15 ವರ್ಷಗಳ ಕಾಲ ಬಂಗಾಳ ರಾಜಕೀಯದ ಕೇಂದ್ರಬಿಂದುವಾಗಿದ್ದ ಮಮತಾ ಬ್ಯಾನರ್ಜಿ ಎದುರಿಸಿದ ಈ ಸೋಲು, ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಸೂಚನೆ ನೀಡುತ್ತಿದೆ.