ಇಂಧನ ದರ ಏರಿಕೆ ಎಫೆಕ್ಟ್: ಖಾಸಗಿ ಬಸ್ ಟಿಕೆಟ್ ದರ ಶೇ.30ರವರೆಗೆ ಹೆಚ್ಚಳ
ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಖಾಸಗಿ ಬಸ್ ಪ್ರಯಾಣಿಕರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಇಂಧನ ವೆಚ್ಚ ಮತ್ತು ಕಾರ್ಯಾಚರಣಾ ಖರ್ಚು ಹೆಚ್ಚಳದ ಹಿನ್ನೆಲೆಯಲ್ಲಿ, ಖಾಸಗಿ ಬಸ್ ಟಿಕೆಟ್ ದರವನ್ನು ಇಂದಿನ ಮಧ್ಯರಾತ್ರಿಯಿಂದಲೇ ಶೇ.20ರಿಂದ 30ರಷ್ಟು ಹೆಚ್ಚಿಸಲು ಬಸ್ ಮಾಲೀಕರು ತೀರ್ಮಾನಿಸಿದ್ದಾರೆ.
ಈ ನಿರ್ಧಾರದಿಂದ ರಾಜ್ಯದಾದ್ಯಂತ ಪ್ರತಿದಿನ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀಳಲಿದ್ದು, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ದೂರ ಪ್ರಯಾಣ ಮಾಡುವ ಜನರಿಗೆ ಹೆಚ್ಚುವರಿ ಆರ್ಥಿಕ ಹೊರೆ ಎದುರಾಗಲಿದೆ.
ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಲೇ ಜನಸಾಮಾನ್ಯರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ, ಇದೀಗ ಸಾರಿಗೆ ವೆಚ್ಚವೂ ಏರಿಕೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಡೀಸೆಲ್ ದರ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಸ್‌ಗಳ ನಿರ್ವಹಣೆ, ಸಿಬ್ಬಂದಿ ವೇತನ, ಪರ್ಮಿಟ್ ಹಾಗೂ ಇತರ ಕಾರ್ಯಾಚರಣಾ ವೆಚ್ಚಗಳು ದುಬಾರಿಯಾಗಿವೆ. ಈ ಕಾರಣದಿಂದ ಟಿಕೆಟ್ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ.
ಇಂದು ಬೆಳಿಗ್ಗೆ ತೈಲ ಕಂಪನಿಗಳು ಇಂಧನ ದರ ಪರಿಷ್ಕರಣೆ ಮಾಡಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹3.27 ಹಾಗೂ ಡೀಸೆಲ್ ದರ ₹3.12 ಏರಿಕೆಯಾಗಿದೆ. ಇದೇ ವೇಳೆ ದೇಶಾದ್ಯಂತ ಸಿಎನ್‌ಜಿ ದರವೂ ಪ್ರತಿ ಕೆಜಿಗೆ ₹2 ಹೆಚ್ಚಳವಾಗಿದೆ.
ಹಾರ್ಮುಜ್ ಜಲಸಂಧಿ ದಿಗ್ಬಂಧನದಿಂದ ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವೇ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಖಾಸಗಿ ಬಸ್ ದರ ಏರಿಕೆ ಜಾರಿಯಾದ ಹಿನ್ನೆಲೆಯಲ್ಲಿ, ಸಾರ್ವಜನಿಕರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದ್ದು, ಸರ್ಕಾರ ಮಧ್ಯಪ್ರವೇಶಿಸಿ ಜನರಿಗೆ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.