Home Uncategorizedಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಇಂದು ರಾಜ್ಯಾದ್ಯಂತ ಮೆಡಿಕಲ್ ಅಂಗಡಿಗಳ ಬಂದ್

ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಇಂದು ರಾಜ್ಯಾದ್ಯಂತ ಮೆಡಿಕಲ್ ಅಂಗಡಿಗಳ ಬಂದ್

by anamika

ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಇಂದು ರಾಜ್ಯಾದ್ಯಂತ ಮೆಡಿಕಲ್ ಅಂಗಡಿಗಳ ಬಂದ್

ಆನ್‌ಲೈನ್ ಮೂಲಕ ನಡೆಯುತ್ತಿರುವ ಔಷಧ ಮಾರಾಟ ಹಾಗೂ ನಿಯಮ ಉಲ್ಲಂಘನೆಗಳನ್ನು ವಿರೋಧಿಸಿ ಇಂದು (ಮೇ 20) ಕರ್ನಾಟಕದ 20 ಸಾವಿರಕ್ಕೂ ಹೆಚ್ಚು ಮೆಡಿಕಲ್ ಅಂಗಡಿಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಅಖಿಲ ಭಾರತ ಔಷಧ ವ್ಯಾಪಾರಿಗಳ ಮತ್ತು ಔಷಧ ವಿತರಕರ ಸಂಘಟನೆ ಕರೆ ನೀಡಿರುವ ದೇಶವ್ಯಾಪಿ 24 ಗಂಟೆಗಳ ಬಂದ್‌ಗೆ ರಾಜ್ಯದ ಔಷಧ ವ್ಯಾಪಾರಿಗಳು ಸಹ ಭಾಗಿಯಾಗಿದ್ದು, ದೇಶದಾದ್ಯಂತ ಸುಮಾರು 15 ಲಕ್ಷಕ್ಕೂ ಹೆಚ್ಚು ಔಷಧ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಲಿದ್ದಾರೆ ಎಂದು ತಿಳಿಸಲಾಗಿದೆ.

ಬೆಂಗಳೂರುನಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಘುನಾಥ ರೆಡ್ಡಿ, ಕರ್ನಾಟಕದ ಸುಮಾರು 26 ಸಾವಿರ ಮೆಡಿಕಲ್ ಅಂಗಡಿಗಳು ಬಂದ್‌ನಲ್ಲಿ ಭಾಗವಹಿಸಲಿದ್ದು, ಬೆಂಗಳೂರಿನಲ್ಲೇ ಸುಮಾರು 6,500 ಅಂಗಡಿಗಳು ಶಟರ್‌ ಹಾಕಲಿವೆ ಎಂದು ಮಾಹಿತಿ ನೀಡಿದರು.

ಇ-ಫಾರ್ಮಸಿಗಳು ಔಷಧ ಮತ್ತು ಸೌಂದರ್ಯ ವಸ್ತುಗಳ ಕಾಯ್ದೆಯನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿವೆ. ಹೈಕೋರ್ಟ್ ಆದೇಶಗಳಿದ್ದರೂ ಆನ್‌ಲೈನ್ ಔಷಧ ಮಾರಾಟ ಮುಂದುವರಿದಿದೆ ಎಂದು ಆರೋಪಿಸಿದ ಅವರು, 25ರಿಂದ 40 ಶೇಕಡಾವರೆಗೆ ನೀಡಲಾಗುತ್ತಿರುವ ಭಾರೀ ರಿಯಾಯಿತಿಯಿಂದ ಸಣ್ಣ ಮೆಡಿಕಲ್ ಅಂಗಡಿಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಹೇಳಿದರು.

“ಸಾಮಾನ್ಯವಾಗಿ ಔಷಧ ವ್ಯಾಪಾರದಲ್ಲಿ 16ರಿಂದ 20 ಶೇಕಡಾ ಲಾಭಾಂಶ ಮಾತ್ರ ಇರುತ್ತದೆ. ಆದರೆ ಕಾರ್ಪೊರೇಟ್ ಕಂಪನಿಗಳ ಅತಿಯಾದ ರಿಯಾಯಿತಿ ನೀತಿಯಿಂದ ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಸ್ಯೆಗೆ ಶೀಘ್ರ ಪರಿಹಾರ ಸಿಗದಿದ್ದರೆ ಬಂದ್ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಎಚ್ಚರಿಕೆಯನ್ನು ಸಂಘಟನೆ ನೀಡಿದೆ. ಕೋವಿಡ್ ಸಂದರ್ಭ ಜನರಿಗೆ ನಿರಂತರ ಸೇವೆ ನೀಡಿದ್ದ ಔಷಧ ವ್ಯಾಪಾರ ಕ್ಷೇತ್ರಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

You may also like

Leave a Comment