ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ನಾಳೆ ರಾಜ್ಯಾದ್ಯಂತ ಮೆಡಿಕಲ್ ಅಂಗಡಿಗಳ ಬಂದ್
ಬೆಂಗಳೂರು: ಆನ್‌ಲೈನ್ ಮೂಲಕ ನಡೆಯುತ್ತಿರುವ ಔಷಧ ಮಾರಾಟ ಹಾಗೂ ನಿಯಮ ಉಲ್ಲಂಘನೆಗಳನ್ನು ವಿರೋಧಿಸಿ ಮೇ 20ರಂದು ದೇಶವ್ಯಾಪಿ 24 ಗಂಟೆಗಳ ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ 20 ಸಾವಿರಕ್ಕೂ ಹೆಚ್ಚು ಮೆಡಿಕಲ್ ಅಂಗಡಿಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
ಅಖಿಲ ಭಾರತ ಔಷಧ ವ್ಯಾಪಾರಿಗಳ ಮತ್ತು ಔಷಧ ವಿತರಕರ ಸಂಘಟನೆ ನೀಡಿರುವ ಈ ಬಂದ್‌ನಲ್ಲಿ ದೇಶದಾದ್ಯಂತ ಸುಮಾರು 15 ಲಕ್ಷ ಔಷಧ ವ್ಯಾಪಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ. ರಾಜ್ಯದಲ್ಲಿ ಸುಮಾರು 26 ಸಾವಿರ ಮೆಡಿಕಲ್ ಅಂಗಡಿಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿದ್ದು, ಬೆಂಗಳೂರಿನಲ್ಲೇ ಸುಮಾರು 6,500 ಅಂಗಡಿಗಳು ಶಟರ್ ಹಾಕಲಿವೆ ಎಂದು ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆನ್‌ಲೈನ್ ಫಾರ್ಮಸಿಗಳು ಔಷಧ ಮತ್ತು ಸೌಂದರ್ಯ ವಸ್ತುಗಳ ಕಾಯ್ದೆಯನ್ನು ನಿರಂತರವಾಗಿ ಉಲ್ಲಂಘಿಸುತ್ತಿವೆ ಎಂದು ಆರೋಪಿಸಿರುವ ಸಂಘಟನೆ, ಹೈಕೋರ್ಟ್ ಆದೇಶಗಳಿದ್ದರೂ ಆನ್‌ಲೈನ್ ಮೂಲಕ ಔಷಧ ಮಾರಾಟ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇ-ಫಾರ್ಮಸಿಗಳು 25ರಿಂದ 40 ಶೇಕಡಾವರೆಗೆ ರಿಯಾಯಿತಿ ನೀಡುತ್ತಿರುವುದರಿಂದ ಸಣ್ಣ ಮೆಡಿಕಲ್ ಅಂಗಡಿಗಳ ವ್ಯಾಪಾರಕ್ಕೆ ಭಾರೀ ಹೊಡೆತ ಬಿದ್ದಿದೆ. ಸಾಮಾನ್ಯವಾಗಿ ಔಷಧ ವ್ಯಾಪಾರದಲ್ಲಿ 16ರಿಂದ 20 ಶೇಕಡಾ ಮಾರ್ಜಿನ್ ಮಾತ್ರ ಇರುವುದರಿಂದ ಕಾರ್ಪೊರೇಟ್ ಕಂಪನಿಗಳ ಸ್ಪರ್ಧೆ ಎದುರಿಸಲು ಕಷ್ಟವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಸಮಸ್ಯೆಗೆ ಶೀಘ್ರ ಪರಿಹಾರ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಬಂದ್ ಅವಧಿಯನ್ನು ವಿಸ್ತರಿಸುವ ಎಚ್ಚರಿಕೆಯನ್ನು ಸಂಘಟನೆ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಜನರಿಗೆ ನಿರಂತರ ಸೇವೆ ನೀಡಿದ್ದ ಔಷಧ ವ್ಯಾಪಾರ ಕ್ಷೇತ್ರಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಂಘಟನೆ ಮನವಿ ಮಾಡಿದೆ.