ದಕ್ಷಿಣ ಕನ್ನಡ ಖಾಸಗಿ ಬಸ್ ಪ್ರಯಾಣ ದರ ಸದ್ಯಕ್ಕಿಲ್ಲ ಏರಿಕೆ: ಮಾಲಕರ ಸಂಘದ ಮಹತ್ವದ ತೀರ್ಮಾನ
ಮಂಗಳೂರು: ಡೀಸೆಲ್ ದರ ಏರಿಕೆ, ಬಿಡಿಭಾಗಗಳ ಬೆಲೆ ಹೆಚ್ಚಳ, ತೆರಿಗೆ ಹಾಗೂ ವಿಮೆ ವೆಚ್ಚಗಳ ಏರಿಕೆಯಿಂದ ಖಾಸಗಿ ಬಸ್ ಮಾಲಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ, ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳ ಮಾಡದಿರಲು ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ತೀರ್ಮಾನಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ, ಕಳೆದ ಐದು ವರ್ಷಗಳಿಂದ ಪ್ರಯಾಣ ದರ ಪರಿಷ್ಕರಣೆ ಆಗಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣ ಯಾವುದೇ ದರ ಹೆಚ್ಚಳ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದಿನ ಒಂದು ತಿಂಗಳ ಕಾಲ ಡೀಸೆಲ್ ಬೆಲೆ ಹಾಗೂ ಸಾರಿಗೆ ವೆಚ್ಚಗಳ ಸ್ಥಿತಿಗತಿಗಳನ್ನು ಅವಲೋಕಿಸಿ, ವೈಜ್ಞಾನಿಕ ಪರಿಶೀಲನೆಯ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೇ ವೇಳೆ, ಮುಂಗಾರು ಮಳೆ ಹಾಗೂ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳೊಂದಿಗೆ ಬಸ್ ಚಾಲಕರು ಹಾಗೂ ನಿರ್ವಾಹಕರು ಸೌಮ್ಯವಾಗಿ ವರ್ತಿಸುವಂತೆ ಸೂಚನೆ ನೀಡಲಾಗಿದೆ. ಮಳೆಯ ಸಂದರ್ಭಗಳಲ್ಲಿ ಸುರಕ್ಷಿತ ವಾಹನ ಸಂಚಾರಕ್ಕೆ ಆದ್ಯತೆ ನೀಡುವಂತೆ ಸಂಘದಿಂದ ಬಸ್ ಸಿಬ್ಬಂದಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
