84
ಬೆದ್ರುಪಣೆ: ಆನೆಗಳ ಕಿತ್ತಾಟಕ್ಕೆ ಮರಿಯಾನೆ ಬಲಿ ಶಂಕೆ
ಸುಳ್ಯ: ಅರಂತೋಡು ಗ್ರಾಮದ ಬೆದ್ರುಪಣೆ ಪ್ರದೇಶದಲ್ಲಿ ಸುಮಾರು ಒಂದು ವರ್ಷದ ಮರಿಯಾನೆಯೊಂದು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ಅಶೋಕ್ ಅವರ ಖಾಸಗಿ ತೋಟದಲ್ಲಿ ಮರಿಯಾನೆಯ ಮೃತದೇಹ ಪತ್ತೆಯಾಗಿದೆ.

ರಾತ್ರಿ ವೇಳೆ ಆನೆಗಳ ಹಿಂಡು ತೋಟಕ್ಕೆ ನುಗ್ಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭ ಗಂಡಾನೆಗಳ ನಡುವೆ ತೀವ್ರ ಕಿತ್ತಾಟ ನಡೆದಿದ್ದು, ಅದರ ಪರಿಣಾಮವಾಗಿ ಮರಿಯಾನೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಅರಣ್ಯಾಧಿಕಾರಿ ಮಂಜುನಾಥ್ ಎನ್. ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.