39
10.09 ಸೆಕೆಂಡ್‌ನಲ್ಲಿ 100 ಮೀಟರ್ ಓಟ: ರಾಷ್ಟ್ರೀಯ ದಾಖಲೆ ಬರೆದ ಗುರಿಂದರ್‌ವೀರ್ ಸಿಂಗ್
ರಾಂಚಿ: 29ನೇ ರಾಷ್ಟ್ರೀಯ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗುರಿಂದರ್‌ವೀರ್ ಸಿಂಗ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪುರುಷರ 100 ಮೀಟರ್ ಫೈನಲ್ ಸ್ಪರ್ಧೆಯನ್ನು ಕೇವಲ 10.09 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

ಭಾರತೀಯ ನೌಕಾಪಡೆಯ ಅಧಿಕಾರಿ ಹಾಗೂ ಪಂಜಾಬ್ ಮೂಲದ ಗುರಿಂದರ್‌ವೀರ್, ಈ ಸಾಧನೆಯೊಂದಿಗೆ 10.10 ಸೆಕೆಂಡ್ ಗಡಿ ದಾಟಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮದೇ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದು ದೇಶದ ‘ಅತಿ ವೇಗದ ಓಟಗಾರ’ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.

ಈ ಅದ್ಭುತ ಪ್ರದರ್ಶನದಿಂದ ಗುರಿಂದರ್‌ವೀರ್ ಸಿಂಗ್, 2026ರ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯುವತ್ತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅವರ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾ ವಲಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.