ಬೆಂಗಳೂರು: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಅಂತಿಮ ಸುತ್ತಿನಲ್ಲಿ ತೀವ್ರ ಪೈಪೋಟಿ ನೀಡಿದ ‘ಗಿಲ್ಲಿ’ ಖ್ಯಾತಿಯ ನಟ ಈ ಬಾರಿಯ ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಟ್ರೋಫಿ ಮುತ್ತಿಕ್ಕಿದ್ದಾರೆ. ನಿರೀಕ್ಷೆಯಂತೆಯೇ ವಿನ್ನರ್‌ಗೆ 50 ಲಕ್ಷ ರೂಪಾಯಿ ನಗದು ಹಣದ ಜೊತೆಗೆ ವಿಶೇಷ ಉಡುಗೊರೆಗಳನ್ನು ನೀಡಲಾಗಿದೆ. ಆದರೆ, ಇಡೀ ಸೀಸನ್‌ನಲ್ಲಿ ತನ್ನ ನೇರ ನಡೆ-ನುಡಿ ಮತ್ತು ನಿಷ್ಕಲ್ಮಶ ವ್ಯಕ್ತಿತ್ವದಿಂದ ಮನೆಮಾತಾಗಿದ್ದ ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಕಳೆದ ಕೆಲವು ಸೀಸನ್‌ಗಳವರೆಗೂ ಬಿಗ್ ಬಾಸ್‌ನಲ್ಲಿ ಕೇವಲ ವಿನ್ನರ್‌ಗೆ ಮಾತ್ರ ದೊಡ್ಡ ಮೊತ್ತದ ಬಹುಮಾನ ಸಿಗುತ್ತಿತ್ತು, ರನ್ನರ್ ಅಪ್ ಆದವರಿಗೆ ಯಾವುದೇ ನಗದು ಬಹುಮಾನವಿರುತ್ತಿರಲಿಲ್ಲ. ಈ ಬಗ್ಗೆ ವೀಕ್ಷಕರಿಂದ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ವಾಹಿನಿಯು ರನ್ನರ್ ಅಪ್ ಸ್ಥಾನ ಪಡೆದವರಿಗೂ ಗೌರವಯುತ ಬಹುಮಾನ ನೀಡುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ. ಈ ಬಾರಿ ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿ ಅವರಿಗೆ ಪ್ರಾಯೋಜಕರಿಂದ ಬಂಪರ್ ಕೊಡುಗೆಗಳೇ ಸಿಕ್ಕಿವೆ.
ರಕ್ಷಿತಾ ಶೆಟ್ಟಿ ಅವರಿಗೆ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಟಿ.ಎ. ಶರವಣ ಅವರು ವೇದಿಕೆಗೆ ಆಗಮಿಸಿ ರಕ್ಷಿತಾ ಅವರಿಗೆ ಚೆಕ್ ಹಸ್ತಾಂತರಿಸಿದರು. ಇದಲ್ಲದೆ, ಜಾರ್ ಅಪ್ಲಿಕೇಶನ್ ವತಿಯಿಂದ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಲಾಯಿತು. ಒಟ್ಟಾರೆಯಾಗಿ 25 ಲಕ್ಷ ರೂಪಾಯಿಗಳ ಬೃಹತ್ ಮೊತ್ತವನ್ನು ಪಡೆಯುವ ಮೂಲಕ ರಕ್ಷಿತಾ ಅವರು ಕೇವಲ ಜನರ ಮನಸ್ಸನ್ನು ಮಾತ್ರವಲ್ಲದೆ, ಅರ್ಹವಾದ ಸಂಭಾವನೆಯನ್ನು ಕೂಡ ಜೇಬಿಗಿಳಿಸಿಕೊಂಡಿದ್ದಾರೆ.