Home Uncategorizedದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಮುಂದೂಡಿಕೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಮುಂದೂಡಿಕೆ

by anamika

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಮುಂದೂಡಿಕೆ

 

ಬೆಂಗಳೂರು, ಏ.7: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಬೇಕಿದ್ದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಮಂಗಳವಾರ ಮುಂದೂಡಲಾಗಿದೆ. ಫಲಿತಾಂಶ ಪ್ರಕಟಣೆಯ ಹೊಸ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಇದೇ ಮೊದಲ ಬಾರಿ, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಕ್ಕೂ ಮುನ್ನವೇ ಫಲಿತಾಂಶ ಪ್ರಕಟಣೆಗೆ ಸಂಭಾವ್ಯ ದಿನಾಂಕವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದರು. ಆದರೆ ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಹಿನ್ನೆಲೆ ಇಂದು ಫಲಿತಾಂಶ ಪ್ರಕಟಣೆ ಸಾಧ್ಯವಾಗಿಲ್ಲವೆಂದು ತಿಳಿದು ಬಂದಿದೆ.

ಮಂಡಳಿ ಅಧಿಕಾರಿಗಳ ಪ್ರಕಾರ, ಉಪಚುನಾವಣೆ ನೀತಿ ಸಂಹಿತೆ ಜಾರಿಯಿರುವುದರಿಂದ ಫಲಿತಾಂಶ ಪ್ರಕಟಣೆಗೆ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಕಳುಹಿಸಲಾಗಿದೆ. ಆಯೋಗದ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ. ಹೀಗಾಗಿ ಏಪ್ರಿಲ್ 7ರಂದು ಫಲಿತಾಂಶ ಪ್ರಕಟಣೆ ಆಗುವುದಿಲ್ಲ. ಮಂಗಳವಾರ ಆಯೋಗದಿಂದ ಅನುಮತಿ ದೊರೆತರೆ, ಏಪ್ರಿಲ್ 8 ಬುಧವಾರವೇ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಆಯೋಗದ ಉನ್ನತ ಮೂಲಗಳ ಪ್ರಕಾರ ಫಲಿತಾಂಶ ಪ್ರಕಟಣೆಗೆ ಯಾವುದೇ ಅಭ್ಯಂತರವಿಲ್ಲವೆಂದು ಈಗಾಗಲೇ ಹಿಂಬರಹದ ಮೂಲಕ ತಿಳಿಸಲಾಗಿದೆ. ಆದರೆ ಉಪಚುನಾವಣೆ ಮತದಾನ ಪೂರ್ಣಗೊಳ್ಳುವವರೆಗೆ ಸಚಿವರು ಲಭ್ಯವಿಲ್ಲದ ಕಾರಣ ಫಲಿತಾಂಶ ಪ್ರಕಟಣೆ ಮುಂದೂಡಲಾಗಿದೆ ಎನ್ನಲಾಗಿದೆ.

You may also like

Leave a Comment