ದುಬಾರೆ ಶಿಬಿರದಲ್ಲಿ ಮತ್ತೊಂದು ದುರಂತ: ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು
ಮಡಿಕೇರಿ: ದುಬಾರೆ ಸಾಕಾನೆ ಶಿಬಿರದಲ್ಲಿ ಸೋಮವಾರ ನಡೆದ ಕಂಜನ್ ಹಾಗೂ ಮಾರ್ತಾಂಡ ಆನೆಗಳ ಭೀಕರ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ.
ಕಾದಾಟದ ವೇಳೆ ಕಂಜನ್ ಆನೆ, ಮಾರ್ತಾಂಡ ಆನೆಯ ಹೊಟ್ಟೆ, ಕಿವಿ ಸೇರಿದಂತೆ ದೇಹದ ಹಲವು ಭಾಗಗಳಿಗೆ ತೀವ್ರವಾಗಿ ತಿವಿದು ಗಾಯಗೊಳಿಸಿತ್ತು. ಗಾಯಗೊಂಡ ಮಾರ್ತಾಂಡ ಆನೆಗೆ ದುಬಾರೆ ಶಿಬಿರದಲ್ಲೇ ಪಶುವೈದ್ಯರಾದ ಡಾ. ಮುಜಿಭ್ ಹಾಗೂ ಚಿಟ್ಟಿಯಪ್ಪ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದೆ.

ಇದೇ ಕಾದಾಟದ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ರಾಜ್ಯದಾದ್ಯಂತ ಆತಂಕ ಮೂಡಿಸಿತ್ತು. ಘಟನೆ ಹಿನ್ನೆಲೆಯಲ್ಲಿ ಇಂದು ದುಬಾರೆ ಸಾಕಾನೆ ಶಿಬಿರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಮುಂದಿನ ಆದೇಶದವರೆಗೂ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಇನ್ನೊಂದೆಡೆ, ಕಾದಾಟದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಸ್ಥರು ನೇತ್ರದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮೃತದೇಹವನ್ನು ಬಳಿಕ ಚೆನ್ನೈಗೆ ರವಾನಿಸಲಾಗಿದೆ.
