Home Uncategorizedಕೆಂಜಳ ತಿರುವಿನಲ್ಲಿ ಭೀಕರ ಅಪಘಾತ: ಮಹಿಳೆ ಸಾವು, 7 ಮಂದಿಗೆ ಗಾಯ

ಕೆಂಜಳ ತಿರುವಿನಲ್ಲಿ ಭೀಕರ ಅಪಘಾತ: ಮಹಿಳೆ ಸಾವು, 7 ಮಂದಿಗೆ ಗಾಯ

by anamika

ಕೆಂಜಳ ತಿರುವಿನಲ್ಲಿ ಭೀಕರ ಅಪಘಾತ: ಮಹಿಳೆ ಸಾವು, 7 ಮಂದಿಗೆ ಗಾಯ

ಕಡಬ: ಗುಂಡ್ಯ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡ ಘಟನೆ ನಡೆದಿದೆ.

ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಬೆಂಗಳೂರಿನತ್ತ ತೆರಳುತ್ತಿದ್ದ ಟೆಂಪೋ ಟ್ರಾವೆಲ್ಲರ್ ಹಾಗೂ ಧರ್ಮಸ್ಥಳ ಕಡೆಯಿಂದ ಸುಬ್ರಹ್ಮಣ್ಯದತ್ತ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಬೆಂಗಳೂರು ದೇವನಹಳ್ಳಿ ಕೋಟೆ ನಿವಾಸಿ ಸಂಜು ವಿ. ಚಾಲನೆ ಮಾಡುತ್ತಿದ್ದ ಟೆಂಪೋ ಟ್ರಾವೆಲ್ಲರ್‌ (KA 43 A 6435)ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಶೇಟ್ ಮಲ್ಲಿಕಾ ಮದ್ರಾಸ್ ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕೆಂಜಳದ ಅಪಾಯಕಾರಿ ತಿರುವಿನಲ್ಲಿ ಎರಡೂ ವಾಹನಗಳು ಡಿಕ್ಕಿಯಾಗಿದ್ದು, ಟ್ರಾವೆಲ್ಲರ್ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ದೇವನಹಳ್ಳಿಯಿಂದ ಹೊರಟಿದ್ದ ಯಾತ್ರಾರ್ಥಿಗಳ ತಂಡ ಹೊರನಾಡು, ಶೃಂಗೇರಿ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿ, ಮೇ 25ರಂದು ಸೌತಡ್ಕ ಮತ್ತು ಸುಬ್ರಹ್ಮಣ್ಯದಲ್ಲಿ ಪೂಜೆ ಸಲ್ಲಿಸಿ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದ್ದು, ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮರುಕಳಿಸುತ್ತಿರುವ ಅಪಘಾತಗಳಿಗೆ ಆತಂಕ

ಗುಂಡ್ಯ–ಸುಬ್ರಹ್ಮಣ್ಯ ರಸ್ತೆಯ ಕೆಂಜಳ ತಿರುವು ಅಪಾಯಕಾರಿ ಪ್ರದೇಶವಾಗಿ ಪರಿಣಮಿಸಿದ್ದು, ಇಲ್ಲಿ ನಿರಂತರವಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅತಿವೇಗದ ಚಾಲನೆ, ತಿರುವಿನ ಅಪಾಯಕಾರಿ ವಿನ್ಯಾಸ ಹಾಗೂ ದೂರ ಪ್ರಯಾಣದಿಂದ ಉಂಟಾಗುವ ಚಾಲಕರ ನಿದ್ರಾಮಂಪರು ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಲಾಗಿದೆ.

ಯಾತ್ರಾರ್ಥಿಗಳ ವಾಹನ ಸಂಚಾರ ಹೆಚ್ಚಿರುವ ಈ ರಾಜ್ಯ ಹೆದ್ದಾರಿಯಲ್ಲಿ ತಕ್ಷಣವೇ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗೆ ಒತ್ತಾಯಿಸಿದ್ದಾರೆ.

 

You may also like

Leave a Comment